ನೂರ್ ಮಹಮದ್ 
	ಸು. 1740. ಒಬ್ಬ ಸೂಫಿ ಪ್ರೇಮಾಖ್ಯಾನ ಕವಿ. ಈತನ ಉಪನಾಮ ಕಾಮಯಾಬ್. ಜೌನಪುರ ಜಿಲ್ಲೆಯ ಸಬರಹದ್ ಎಂಬ ಸ್ಥಳದ ನಿವಾಸಿ. ಪಾರಸಿ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವವಿದ್ದ ಈತ ಪಾರಸಿಯಲ್ಲಿ ತಾಗತುಲ್ ಹಕಾಯತ್ ಮತ್ತು ದೀವಾನಗಳನ್ನೂ ಹಿಂದಿಯಲ್ಲಿ, ವಿಶೇಷವಾಗಿ ಅವಧಿ ಭಾಷೆಯಲ್ಲಿ, ಇಂದ್ರಾವತಿ ಮತ್ತು ಅನುರಾಗಬಾಂಸುರಿ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಈತನ ಪಾರಸಿ ಕೃತಿಗಳು ಸದ್ಯದಲ್ಲಿ ಉಪಲಬ್ದವಿಲ್ಲ. ಇಂದ್ರಾವತಿ ಒಂದು ಆಖ್ಯಾನ ಕಾವ್ಯವಾಗಿದ್ದು ಅದರಲ್ಲಿ ಕಲಿಂಗದ ರಾಜಕುಮಾರ ರಾಜಕುವರ ಹಾಗೂ ಆಗಮಪುರದ ರಾಜಕುಮಾರಿ ಇಂದ್ರಾವತಿಯ ಪ್ರೇಮಕಥೆಯ ವರ್ಣನೆಯುಂಟು. ಇದು ಚೌತಾಯಿಗಳ ಅನಂತರ ಒಂದು ದೋಹ ಬರುವುದು ಈ ರಚನೆಯ ವೈಶಿಷ್ಟ್ಯ. ಅನುರಾಗ ಬಾಂಸುರಿ ಗ್ರಂಥ ಪಾರಸಿ ಅರಬ್ಬಿ ಲಿಪಿಯಲ್ಲಿದೆ. ಇದು ತತ್ವಜ್ಞಾನದ ಒಂದು ಆಗರ. ಪರಮಾತ್ಮ ಹಾಗೂ ಜೀವಗಳ ನಡುವೆ ಇರುವ ಮನೋವೃತ್ತಿಗಳನ್ನು ಬಳಸಿ ಹೆಣೆದಿರುವ ಇಂಥ ಪ್ರೇಮಕಥೆಯ ಚಿತ್ರಣ ಬಹು ಅಪರೂಪ. ಸೂಫಿ ಪ್ರೇಮಾಖ್ಯಾನ ಕಾವ್ಯಗಳಲ್ಲಿ ಕಡೆಯದೆನ್ನಲಾಗಿರುವ ಈ ಕೃತಿ ಸಂಸ್ಕøತ ಭೂಯಿಷ್ಟವಾದ್ದು. ಕೆಲವೆಡೆಗಳಲ್ಲಿ ವಜ್ರಭಾಷಾ ಪ್ರಯೋಗಗಳು ದೊರಕುತ್ತವೆ. ಆರು ಸಾಲುಗಳ ಅನಂತರ ದೋಹಕ್ಕೆ ಬದಲಾಗಿ ಬರವೈ ಛಂದಸ್ಸು ಬರುವುದು ಇಲ್ಲಿಯ ವೈಶಿಷ್ಟ್ಯ.

	ಇತರ ಸೂಫಿ ಕವಿಗಳಂತೆ ನೂರ್ ಮಹಮದ್ ತಾನು ಪಕ್ಕಾ ಮಹಮದೀಯನೆಂದು ಘೋಷಿಸಿಕೊಂಡರೂ ಹಿಂದೂ ಧರ್ಮ ಹಾಗೂ ಹಿಂದೂ ಕಥೆಗಳತ್ತ ಅಪಾರ ಒಲವನ್ನು ತೋರಿದ್ದಾನೆ. ಹಿಂದೂ ಮುಸಲ್ಮಾನರ ಐಕ್ಯತೆಯ ಸುಂದರ ಚಿತ್ರಣ ಇಲ್ಲಿನಂತೆ ಬೇರೆಡೆ ದೊರೆಯುವುದು ಅಪರೂಪ.

	ಈತನೊಡನೆ ಸೂಫಿ ಪ್ರೇಮಾಖ್ಯಾನ ಕಾವ್ಯಗಳು ಕೊನೆಗೊಳ್ಳುತ್ತವೆ.					(ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ